ಅಂಬೆಯ ಕತೆ ಮಹಾಭಾರತದ ಆದಿಪರ್ವದಲ್ಲಿ ಶುರುವಾದರೂ, ಮಹಾಬಾರತದ ಕುರುಕ್ಷೇತ್ರ ಯುದ್ಧದಲ್ಲಿ ಕೊನೆಯಾಗುತ್ತದೆ. ತೀರ ಸಣ್ಣ ಕತೆಯಾದರು ಬಹಳ ಮಹತ್ವದ ಕತೆ. ಮಹಾಭಾರತದ ವಿಶೇಷವೇ ಅಂಥಾದ್ದು, ಅಲ್ಲಿ ಬರುವ ಪ್ರತಿಯೊಂದು ಪಾತ್ರವು ಪ್ರಮುಖವೆನಿಸುವಷ್ಟು ಹಿರಿದಾಗಿ ಬದುಕಿರುತ್ತಾರೆ. ಸೋಲನ್ನೇ ಅರಿಯದ ಭೀಷ್ಮನನ್ನು, ಜನ್ಮಗಳನ್ನೆತ್ತಿಯಾದರೂ ಸೋಲಿಸಿದ ದಿಟ್ಟ ಹೆಣ್ಣು ಅಂಬೆ. ಭೀಷ್ಮ ಮಾಡಿದ ಒಂದು ತಪ್ಪು, ಅಂಬೆಯನ್ನು ದುರಂತ ನಾಯಕಿಯನ್ನಾಗಿ ಬದಲಾಯಿಸಿ, ತಾನು ಮಾಡಿದ ಸಣ್ಣ ತಪ್ಪಿನ ಪರಿಣಾಮ ಕೊನೆಗೆ ಆತನ ಬದುಕನ್ನು ಕೊನೆಗೊಳಿಸುವ ಕಾರಣವಾಗುತ್ತದೆ. ತಾನು ಮಾಡಿದ ಸಣ್ಣ ತಪ್ಪು, ಹೇಗೆ ತನ್ನನ್ನೇ ಬಲಿ ತೆಗೆದುಕೊಳ್ಳುತ್ತದೆ ಎನ್ನುವುದಕ್ಕೆ ಇದೊಂದು ಉದಾಹರಣೆ.
ಕುರುವಂಶದ ರಾಜನಾದ ಶಂತನು ಚಕ್ರವರ್ತಿಯು ಹಸ್ತಿನಾಪುರದಲ್ಲಿ ರಾಜ್ಯಭಾರ ಮಾಡುತ್ತಿದ್ದನು. ಒಮ್ಮೆ ಗಂಗಾತೀರದ ತಟದಲ್ಲಿ ಶಂತನು ಮಹಾರಾಜ ಓಡಾಡುತ್ತಿರಬೇಕಾದರೆ, ಗಂಗೆ ಇವನಿಗೆ ಕಾಣಿಸಿಕೊಳ್ಳುತ್ತಾಳೆ. ಗಂಗೆಯನ್ನು ಕಂಡ ಶಂತನು, ಆಕೆಯಲ್ಲಿ ಮೋಹಿತನಾಗಿ, ತನ್ನನ್ನು ವಿವಾಹವಾಗುವಂತೆ ಕೇಳಿಕೊಳ್ಳುತ್ತಾನೆ. ಅದಕ್ಕೆ ಗಂಗೆ, ತಾನು ಏನು ಮಾಡಿದರೂ, ಏಕೆ ಮಾಡಿದೆ ಎಂದು ಕೇಳಬಾರದು, ಈ ಶರತ್ತಿಗೆ ಒಪ್ಪುವುದಾದರೆ, ಮದುವೆಯಾಗಲು ಸಿದ್ಧ ಎಂದು ಹೇಳುತ್ತಾಳೆ. ಮದುವೆಯಾದ ನಂತರ ಗಂಗೆ, ತಾನು ಹೆತ್ತ ಏಳು ಮಕ್ಕಳನ್ನು ನದಿಯಲ್ಲಿ ಮುಳುಗಿಸಿ ಸಾಯಿಸಿಬಿಡುತ್ತಾಳೆ. ಗಂಗೆಗೆ ಭಾಷೆ ಕೊಟ್ಟದ್ದರಿಂದ, ಮಕ್ಕಳ ಸಾವಿಗೆ ಕಾರಣ ತಿಳಿಯದೆ, ಶಂತನು ಕೊರಗುತ್ತಾನೆ. ಕೊನೆಗೆ ಎಂಟನೇ ಮಗುವನ್ನು ನದಿಯಲ್ಲಿ ಬಿಸಾಡಲು ಹೊರಟಾಗ, ಇನ್ನು ಸಹಿಸಲಾಗದೆ, ಮಕ್ಕಳನ್ನು ಯಾಕೆ ಸಾಯಿಸುತಿದ್ದೀಯಾ ಎಂದು ಗಂಗೆಗೆ ಕಾರಣ ಕೇಳುತ್ತಾನೆ. ಶಂತನು, ಕೊಟ್ಟ ಮಾತನ್ನು ತಪ್ಪಿದ್ದಕ್ಕೆ, ಗಂಗೆ ಅವನನ್ನು ತೊರೆದು ಹೋಗುತ್ತಾಳೆ. ಕೊನೆಯ ಮಗುವನ್ನು ಸಾಯಿಸದೆ, ಸ್ವಲ್ಪ ಕಾಲ ತನ್ನಬಳಿ ಇಟ್ಟುಕೊಂಡು, ನಂತರ ಮಗು ದೇವವ್ರತನನ್ನು ಶಂತನುವಿಗೆ ಒಪ್ಪಿಸುತ್ತಾಳೆ.
ಶಂತನು ಮಗ ದೇವವ್ರತನನ್ನು, ಸಕಲ ವಿದ್ಯಾ ಪಾರಂಗತನನ್ನಾಗಿ ಮಾಡಿ, ರಾಜ್ಯದ ಯುವರಾಜ ಎಂದು ಘೋಶಿಸಿರುತ್ತಾನೆ. ಹೀಗಿರುವಾಗ, ಒಂದು ದಿನ ನದಿಯನ್ನು ದಾಟಲು ದೋಣಿಯೊಂದನ್ನು ಹತ್ತುತ್ತಾನೆ. ಆ ದೋಣಿಯನ್ನು ನಡೆಸುತ್ತಿದ್ದವಳು ಸತ್ಯವತಿ. ಸತ್ಯವತಿಯ ಚೆಲುವಿಗೆ ಮನಸೋತ ಶಂತನು, ಆಕೆಯಲ್ಲಿ ತನ್ನನ್ನು ವಿವಾಹವಾಗುವಂತೆ ಕೇಳಿಕೊಳ್ಳುತ್ತಾನೆ. ಅದಕ್ಕೆ ಸತ್ಯವತಿ, ತನ್ನ ತಂದೆಯನ್ನು ಕಂಡು ಮಾತನಾಡುವಂತೆ ಸೂಚಿಸುತ್ತಾಳೆ. ಶಂತನು ಸತ್ಯವತಿ ತಂದೆಯನ್ನು ಭೇಟಿ ಮಾಡುತ್ತಾನೆ. ಸತ್ಯವತಿಯ ತಂದೆ, ಶಂತನು ತನ್ನ ಮಗಳನ್ನು ಮದುವೆಯಾಗಬೇಕಾದರೆ, ಆಕೆಯ ಹೊಟ್ಟೆಯಲ್ಲಿ ಹುಟ್ಟಿದ ಮಗು, ಮುಂದೆ ಹಸ್ತಿನಾಪುರದ ರಾಜನಾಗಬೇಕು ಎಂಬ ಶರತ್ತನ್ನು ಹಾಕುತ್ತಾನೆ. ಹಿರಿಯ ಮಗನಿರುವಾಗ ಶಂತನುವಿಗೆ, ಸತ್ಯವತಿಯ ತಂದೆಯ ಶರತ್ತು ಒಪ್ಪಿಗೆಯಾಗುವುದಿಲ್ಲ. ಅರಮನೆಗೆ ಹಿಂದಿರುಗಿ, ಇದೇ ಚಿಂತೆಯಲ್ಲಿ ಶಂತನು ಕೋರಗುತ್ತಿರುತ್ತಾನೆ. ತಂದೆ ಎಂದಿನಂತೆ ಇಲ್ಲದಿರುವುದನ್ನು ಕಂಡ ದೇವವ್ರತ, ತಂದೆಯ ರಥದ ಸಾರತಿಯಿಂದ ಸತ್ಯವತಿಯ ವಿಶಯ ತಿಳಿದು, ಸತ್ಯವತಿಯ ಮನೆಗೆ ಹೋಗುತ್ತಾನೆ. ಅಲ್ಲಿ ಸತ್ಯವತಿಯ ತಂದೆಯನ್ನು ಕಂಡು, ಅವರ ಶರತ್ತಿಗೆ ತಾನು ಒಪ್ಪಿರುವುದಾಗಿ ತಿಳಿಸುತ್ತಾನೆ. ಆದರೆ ಸತ್ಯವತಿಯ ತಂದೆ, ದೇವವ್ರತನಿಗೆ, ಮತ್ತೊಂದು ಶರತ್ತನ್ನು ಹಾಕುತ್ತಾನೆ. ಅದೇನೆಂದರೆ, ದೇವವ್ರತನು ಆಜನ್ಮ ಬ್ರಹ್ಮಚಾರಿಯಾಗಿರಬೇಕು, ಏಕೆಂದರೆ ಆತನಿಗೆ ಹುಟ್ಟುವ ಮಕ್ಕಳು ಮುಂದೆ ಸತ್ಯವತಿಯ ಸಂತಾನದ ಆಡಳಿತಕ್ಕೆ ತೊಂದರೆ ಮಾಡಿಯಾರೆಂಬ ಯೋಚನೆಯಿಂದ, ಈ ಶರತ್ತನ್ನು ವಿಧಿಸುತ್ತಾನೆ. ದೇವವ್ರತ ತಾನು ರಾಜ್ಯಭಾರವನ್ನು ವಹಿಸುವುದಿಲ್ಲಾ ಹಾಗು ಮದುವೆಯಾಗದೆ ಬ್ರಹ್ಮಚಾರಿಯಾಗಿಯೇ ಉಳಿಯುತ್ತೇನೆ ಎಂಬ ಪ್ರತಿಜ್ಞೆ ಮಾಡಿ, ಸತ್ಯವತಿಯ ತಂದೆಯನ್ನು ಮದುವೆಗೆ ಒಪ್ಪಿಸುತ್ತಾನೆ. ಇಂಥಾ ಭಯಂಕರ ಪ್ರತಿಜ್ಞೆ ಮಾಡಿದ್ದರಿಂದಲೇ, ದೇವವ್ರತನಿಗೆ ಭೀಷ್ಮನೆಂದು ಹೆಸರಾಯಿತು. ಶಂತನುವಿಗೆ ಸತ್ಯವತಿಯಿಂದ ಚಿತ್ರಾಂಗದ, ವಿಚಿತ್ರವೀರ್ಯ ಎಂಬ ಇಬ್ಬರು ಮಕ್ಕಳು ಹುಟ್ಟಿದರು. ಶಂತನುವಿನ ಮರಣಾನಂತರ, ಚಿತ್ರಾಂಗದನು ಒಬ್ಬ ಗಂದರ್ವನೊಡನೆ ಹೋರಾಡಿ ಮಡಿಯುತ್ತಾನೆ. ಸತ್ಯವತಿ ಹಾಗೂ ಭೀಷ್ಮ, ವಿಚಿತ್ರವೀರ್ಯನಿಗೆ ಮದುವೆ ಮಾಡಬೇಕೆಂದು ಯೋಚಿಸುವ ಸಮಯಕ್ಕೆ, ಕಾಶೀರಾಜ್ಯದ ರಾಜ ತನ್ನ ಮೂರು ಕುಮಾರಿಯರಾದ ಅಂಬಾ, ಅಂಬಿಕಾ ಹಾಗೂ ಅಂಬಾಲಿಕಾ, ಇವರಿಗೆ ಸ್ವಯಂವರವನ್ನು ಏರ್ಪಡಿಸಿರುವ ಸುದ್ದಿ ತಿಳಿಯುತ್ತದೆ.
ಇತ್ತ ಕಾಶೀರಾಜ್ಯದಲ್ಲಿ, ಅಂಬೆ ಸೌಬಲ ರಾಜ್ಯದ ರಾಜ ಸಾಲ್ವನ ಕೊರಳಿಗೆ ವರಮಾಲೆ ಹಾಕುವ ಕನಸನ್ನು ಕಾಣುತ್ತಿರುತ್ತಾಳೆ. ಅಂಬೆ ಹಾಗೂ ಸಾಲ್ವ ರಾಜ ಒಬ್ಬರೊಬ್ಬರನ್ನು ಪ್ರೀತಿಸಿತ್ತಿರುತ್ತಾರೆ. ಸ್ವಯಂವರಕ್ಕೆ ಭೀಷ್ಮ ಬರುತ್ತಿರುವ ಸುದ್ದೀ ಎಲ್ಲರನ್ನೂ ಭಯಭೀತರನ್ನಾಗಿಸುತ್ತದೆ. ಭೀಷ್ಮ ತನ್ನ ಮನಸ್ಸಿನಲ್ಲಿ ಮೂರು ರಾಜಕುಮಾರಿಯರನ್ನು ತನ್ನ ತಮ್ಮನಿಗೆ ಮದುವೆ ಮಾಡಿಸಬೇಕೆಂದು ಯೋಚಿಸಿರುತ್ತಾನೆ. ಸ್ವಯಂವರಕ್ಕೆ ಬಂದವನೇ, ಮೂರು ರಾಜಕುಮಾರಿಯರನ್ನು ತಾನು ಕರೆದುಕೊಂಡು ಹೋಗುವೆನೆಂದೂ, ಧೈರ್ಯವಿದ್ದವರು ತನ್ನನ್ನು ಎದುರಿಸಿ ರಾಜಕುಮರಿಯರನ್ನು ಕರೆದೊಯ್ಯಬಹುದು, ಎಂದು ಘೋಶಿಸುತ್ತಾನೆ. ಭೀಷ್ಮ ಮೂರು ರಾಜಕುಮಾರಿಯರನ್ನು ತನ್ನ ರಥದಲ್ಲಿ ಕುಳ್ಳಿರಿಸಿಕೊಂಡು, ತನ್ನ ರಥವನ್ನು ಹಸ್ತಿನಾಪುರದ ಕಡೆ ನಡೆಸುತ್ತಾನೆ. ಆಗ ಅಲ್ಲಿ ನೆರೆದಿದ್ದ ರಾಜರು ಭೀಷ್ಮನನ್ನು ಎದುರಿಸಲು ಸಿದ್ದರಾಗಿ ಅವನ ಮೇಲೆ ಬಾಣಗಳ ಸುರಿಮಳೆ ಸುರಿಸುತ್ತಾರೆ. ಆದರೆ ಭೀಷ್ಮ ಅವರನ್ನೆಲ್ಲಾ ಸೋಲಿಸು ಮುನ್ನಡೆಯುತ್ತಾನೆ. ಸಾಲ್ವ ರಾಜ, ಭೀಷ್ಮನನ್ನು ತಡೆದು ಯುದ್ದಕ್ಕೆ ಆಹ್ವಾನಿಸುತ್ತಾನೆ. ಆದರೆ ಭೀಷ್ಮ ಅವನನ್ನು ಸೊಲಿಸಿ, ಕೊನೆಗೆ ಸಾಯಿಸಿದೆ ಪ್ರಾಣ ಭಿಕ್ಷೇ ನೀಡಿ ಮುಂದೆ ನಡೆಯುತ್ತಾನೆ. ಹಸ್ತಿನಾಪುರಕ್ಕೆ ಹಿಂದಿರುಗಿದ ಭೀಷ್ಮ, ಮೂರು ರಾಜಕುಮಾರಿಯರನ್ನು ಸತ್ಯವತಿಯ ವಶಕ್ಕೆ ಕೊಡುತ್ತಾನೆ. ಸತ್ಯವತಿ ಅ ಮೂರು ರಾಜಕುಮಾರಿಯರ ಮದುವೆಯನ್ನು ವಿಚಿತ್ರವೀರ್ಯನೊಂದಿಗೆ ಏರ್ಪಡಿಸಲು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿರುತ್ತಾಳೆ.
ADVERTISEMENT
REPORT THIS AD
ಅರಮನೆಯಲ್ಲಿ, ಅಂಬೆ ತಾನು ಸಾಲ್ವ ರಾಜನನ್ನು ಪ್ರೀತಿಸಿದ್ದು, ಸ್ವಯಂವರದಲ್ಲಿ ಅತನನ್ನು ವರಿಸುವವಳಾಗಿದ್ದ ವಿಶಯವನ್ನು ಭೀಷ್ಮನಲ್ಲಿ ಹೇಳಿಕೊಳ್ಳುತ್ತಾಳೆ. ಈ ವಿಶಯ ಇದುವರೆವಿಗೂ ತಿಳಿಯದ ಭೀಷ್ಮ, ಅಂಬೆಯನ್ನು ಆಕೆಯ ಇಷ್ಟದಂತೆ ಸಾಲ್ವರಾಜನಲ್ಲಿಗೆ ಸಕಲ ರಾಜ ಮರ್ಯಾದೆಯೊಡನೆ ಕಳಿಸಿಕೊಡುತ್ತಾನೆ. ಅಂಬೆ ಸಾಲ್ವನನ್ನು ಭೇಟಿ ಮಾಡಲು ಹೊರಟನಂತರ, ಹಸ್ತಿನಾಪುರದಲ್ಲಿ ಅಂಬಿಕಾ ಹಾಗೂ ಅಂಬಾಲಿಕಾರ ವಿವಾಹ ವಿಚಿತ್ರವೀರ್ಯನೊಡನೆ ವಿಜ್ರಂಬಣೆಯಿಂದ ನಡೆಯುತ್ತದೆ. ಅತ್ತ ಸೌಬಲ ರಾಜ್ಯದಲ್ಲಿ, ಅಂಬೆ ಸಾಲ್ವರಾಜನನ್ನು ಭೇಟಿ ಮಾಡಿ ಮದುವೆಯ ಪ್ರಸ್ತಾಪ ಮುಂದಿಡುತ್ತಾಲೆ. ಆದರೆ ಭೀಷ್ಮನಿಂದಾದ ಸೋಲಿನಿಂದ ಅವಮಾನಿತನಾಗಿದ್ದ ಸಾಲ್ವನು, “ಭೀಷ್ಮ ಸ್ವಯಂವರದಲ್ಲಿ ಗೆದ್ದು ಕರೆದುಕೊಂಡು ಹೋದವಳನ್ನು ತಾನು ಮದುವೆಯಾಗುವುದಿಲ್ಲಾ, ಆತ ಕರೆದೊಯ್ಯುವಾಗ ನೀನು ಸಂತೋಶದಿಂದ ಆತನೊಡನೆ ಹೊರಟ ನೀನು, ಆತನ ಹೆಂಡತಿಯಾದ್ದರಿಂದ, ಮತ್ತೆ ನಾನು ಮದುವೆಯಾಗುವುದ ಕ್ಷತ್ರಿಯಧರ್ಮವಲ್ಲಾ” ಎಂದು ಖಡಾಖಂಡಿತವಾಗಿ ಹೇಳುತ್ತಾನೆ. ಸಾಲ್ವನ ನಿರಾಕರಣೆ, ತಾನು ಎಣಿಸದ ದೊಡ್ಡ ಆಘಾತವಾಗಿ ಅವಳ ಬದುಕನ್ನು ಆವರಿಸುತ್ತದೆ. ಸಾಲ್ವನನ್ನು ಒಪ್ಪಿಸಲು ಪ್ರಯತ್ನಿಸಿದರೂ, ಸಾಲ್ವ ರಾಜ ತನ್ನ ನಿಲುವನ್ನು ಬದಲಿಸಲು ಒಪ್ಪುವುದಿಲ್ಲಾ. ನೊಂದ ಮನಸ್ಸಿನ ಅಂಬೆ ಮತ್ತೆ ಹಸ್ತಿನಾಪುರಕ್ಕೆ ಬರುತ್ತಾಳೆ. ಆಕೆಯ ಬದುಕು ಆಕೆ ರಚಿಸಿ ಕೊಂಡಿದ್ದ ಎಲ್ಲ ಕನಸುಗಳು ನುಚ್ಚು ನೂರಾಗಿ, ತಾನು ಹಿಂದಿರುಗಿ ಹೋಗಲಾರದ ಗಳಿಗೆ ಬಂದು ನಿಂತಿದ್ದಾಳೆ. ಮುಂದಿನ ಬದುಕು ಭೀಕರ ಕತ್ತಲಾಗಿ ತೋರ್ಪಡಿಸುತ್ತಿರುತ್ತದೆ. ಆಗ ಅಂಬೆ, ಭೀಷ್ಮನನ್ನು ಕುರಿತು, “ಈಗ ಸಾಲ್ವ ನನ್ನನ್ನು ವರಿಸಲು ಸಿದ್ದನಿಲ್ಲಾ, ಇದಕ್ಕೆಲ್ಲಾ ನೀನೇ ಕಾರಣ, ಈಗ ನೀನೇ ನನ್ನ ಬದುಕಿಗೆ ಒಂದು ದಾರಿ ಕಲ್ಪಿಸಿಕೊಡು” ಎಂದು ಕೇಳುತ್ತಾಳೆ.ಆಗ ಭೀಷ್ಮ ಬೇಕಾದರೆ ನೀನು ವಿಚಿತ್ರವೀರ್ಯನನ್ನು ಮದುವೆಯಾಗಬಹುದು ಎಂದು ತಿಳಿಸಿ, ತಾನೆ ವಿಚಿತ್ರವೀರ್ಯನನ್ನು ಭೇಟಿಯಾಗಿ, ಅಂಬಾಳನ್ನು ವರಿಸುವಂತೆ ಕೇಳಿಕೊಳ್ಳುತ್ತಾನೆ. ಆದರೇ ವಿಚಿತ್ರವೀರ್ಯ, “ಅಂಬಾ ಸಾಲ್ವರಾಜನನ್ನು ಪ್ರೀತಿಸಿದ್ದರಿಂದ ನಾನು ಆಕೆಯನ್ನು ಮದುವೆಯಾಗಲಾರೆ” ಎಂದು ತಿರಸ್ಕರಿಸುತ್ತಾನೆ.
ಆಗ ಅಂಬೆ ಕೋಪದಿಂದ ಉರಿಯುತ್ತಾ, ಭೀಷ್ಮನನ್ನು ಕುರಿತು, “ಸಾಲ್ವನಿಗೆ ನಾನು ಬೇಡವಾಗಿದ್ದೇನೆ, ವಿಚಿತ್ರವೀರ್ಯ ಕೂಡಾ ನನ್ನನ್ನು ತಿರಸ್ಕರಿಸಿದ್ದಾನೆ, ಕ್ಷತ್ರಿಯ ಧರ್ಮದಂತೆ, ನನ್ನನ್ನು ಸ್ವಯಂವರದಿಂದ ಗೆದ್ದು ತಂದ ನೀನೇ ಮದುವೆಯಾಗಬೇಕು” ಎಂದು ಹೇಳುತ್ತಾಳೆ. ಅದಕ್ಕೆ ಭೀಷ್ಮ, ತಾನು ಆಜನ್ಮ ಬ್ರಹ್ಮಚಾರಿ, ಅವಳನ್ನು ಮದುವೆಯಾಗುವುದು ಅಸಾದ್ಯ ಎಂದು ಹೇಳುತ್ತಾನೆ.
ಮೂವರು ಪುರುಷರಿಂದ ತಿರಸ್ಕೃತಗೊಂಡ ಅಂಬೆ, ಕೋಪದಿಂದ ಉರಿಯಲಾರಂಭಿಸಿದಳು, ತನ್ನ ಬಾಳನ್ನು ಹಾಳು ಮಾಡಿದ ಭೀಷ್ಮನ ಮೇಲೆ ಆಕೆಯ ಕೋಪ ಎಲ್ಲೆ ಮೀರಿತು. ಕಂಡ ಕಂಡರಾಜರಲ್ಲಿ ತೆರಳಿ, ಭೀಷ್ಮನಿಂದ ತನಗೆ ನ್ಯಾಯ ಕೊಡಿಸಬೇಕೆಂದು ಅಂಬೆ ಕೇಳಿಕೊಳ್ಳುತ್ತಾಳೆ, ಆದರೆ ಯಾರೂ ಸಹಾಯ ಮಾಡಲು ಮುಂದೆ ಬರುವುದಿಲ್ಲಾ. ಕೊನೆಗೆ ಕಾಡಿಗೆ ಹೊರಟಳು.
ಕಾಡಿನಲ್ಲಿ ತನ್ನ ಜೀವನವನ್ನು ಹಾಳು ಮಾಡಿದವರ ಬಗ್ಗೆ ಯೋಚಿಸುತ್ತಾಳೆ, ತನ್ನ ತಂದೆ ಸ್ವಯಂವರ ಎರ್ಪಡಿಸಿದ್ದು, ಭೀಷ್ಮ ಸಾಲ್ವನೊಂದಿಗೆ ಯುದ್ಧ ಮಾಡುವಾಗ ತಾನು ಭೀಷ್ಮನ ರಥದಿಂದ ತಪ್ಪಿಸಿಕೊಂಡು ಹೋಗಬಹುದಿತ್ತು, ಆದರೆ ಹೋಗದೆ ರಥದಲ್ಲೇ ಉಳಿದಿದ್ದು, ಭೀಷ್ಮಾ ಮೂವರೂ ರಾಜಕುಮಾರಿಯರನ್ನು ಹೊತ್ತು ಕೊಂಡು ಹೊರಟಿದ್ದು, ಸಾಲ್ವ ತನ್ನನ್ನು ಒಪ್ಪಿಕೊಳ್ಳದೇ ಹೋಗಿದ್ದು, ಎಲ್ಲಾ ಅವಳ ಕಣ್ಣ ಮುಂದೆ ಹಾದು ಹೋದವು. ಈ ಎಲ್ಲಾ ಕಾರಣಗಳಲ್ಲಿ ಎಲ್ಲಕ್ಕಿಂತಾ ಹೆಚ್ಚಾಗಿ, ಭೀಷ್ಮನಿಂದಲೇ ದೊಡ್ಡ ತಪ್ಪಾಗಿರುವುದು ಎಂದು ನಿರ್ಧರಿಸಿದ ಅಂಬಾ, ಯುದ್ಧದಿಂದಾಗಲೀ, ತಪಸ್ಸಿನಿಂದಾಗಲೀ, ಅವನ ನಿರ್ನಾಮವನ್ನು ಮಾಡುವುದಾಗಿ ಪಣ ತೊಡುತ್ತಾಳೆ. ಕಾಡಿನ ದಾರಿಯಲ್ಲಿ ಆಕೆಗೆ ಋಷಿಗಳ ಗುಂಪೊಂದು ಕಾಣುತ್ತದೆ. ಅವರೊಂದಿಗೆ ಸೇರಿಕೊಂಡು, ತನ್ನ ಕತೆಯನ್ನು ಅವರಿಗೆ ತಿಳಿಸುತ್ತಾಳೆ. ಆಗ ಅವರಲ್ಲಿ ಹಿರಿಯನಾದ ಶೈಖವತ್ಯ ಎಂಬ ಋಷಿಯು ಸಮಾಧಾನ ಪಡಿಸಿ, ತಾನು ಆಕೆಗೆ ತಪಸ್ಸಿನಲ್ಲಿ ಸಾಧನೆ ಮಾಡಲು ಸಹಾಯ ಮಾಡುವುದಾಗಿ ತಿಳಿಸುತ್ತಾನೆ. ಉಳಿದ ಋಶಿಗಳು ಒಟ್ಟಾಗಿ ಸಮಾಲೊಚಿಸಿ, ಒಂದು ಹೆಣ್ಣಿಗೆ ಇಬ್ಬರು ರಕ್ಷಕರಿರುತ್ತಾರೆ, ಅವರೆಂದರೆ, ಮೊದಲನೆಯವ ತಂದೆ ಎರಡನೆಯವ ಗಂಡ. ಹಾಗಾಗಿ, ಅಂಬೆಗೆ ತಂದೆಯ ಬಳಿ ಹೋಗುವಂತೆ ಸಲಹೆ ಮಾಡುತ್ತಾರೆ. ಆದರೆ ಅಂಬೆ ತಂದೆಯ ಬಳಿ ಹೋಗುವುದನ್ನು ಇಷ್ಟ ಪಡದೆ, ತಪಸ್ಸಿನ ಕಡೆ ಅವಳ ಮನಸ್ಸು ಹರಿಯುತ್ತದೆ. ಮಾರನೆಯ ದಿನ ಅಂಬಾ ಇದ್ದ ಜಾಗಕ್ಕೆ, ಹೋತ್ರವಾಹನನೆಂಬ ಋಷಿಯು ಬರುತ್ತಾನೆ. ಹೋತ್ರವಾಹನನು ಅಂಬಾಳ ತಾಯಿ ತಂದೆ ಅಂದರೆ ತಾತ, ಹಿಂದೆ ರಾಜ್ಯವನ್ನು ಆಳಿ ನಂತರ, ತಪಸ್ಸನ್ನು ಮಾಡಿ ಋಷಿಯಾಗಿರುತ್ತಾನೆ. ಹೋತ್ರವಾಹನನು ಅಂಬಾಳ ಕತೆ ಕೇಳಿ, ಅವಳಿಗೆ ಪರಶುರಾಮರನ್ನು ಭೇಟಿ ಮಾಡುವಂತೆ ತಿಳಿಸುತ್ತಾನೆ. ಆಗ ಅಂಬಾ ಭೀಷ್ಮನ ಗುರುಗಳಾದ ಪರಶುರಾಮರಲ್ಲಿ ಹೋಗಿ, ನಡೆದ ಘಟನೆಯನ್ನು ವಿವರಿಸಿ ತನಗೆ ನ್ಯಾಯ ಕೊಡಿಸಬೇಕಾಗಿ ಕೇಳಿಕೊಳ್ಳುತ್ತಾಳೆ.
ಪರಶುರಾಮ ಅಂಬಾಳಿಗೆ ನ್ಯಾಯ ದೊರಕಿಸಿಕೊಡುವುದಾಗಿ ಮಾತು ಕೊಟ್ಟು ತಾನು ಕುರುಕ್ಷೇತ್ರಕ್ಕೆ ಬರುತ್ತಾನೆ. ಅಲ್ಲಿ ಪರಶುರಾಮನು, ಭೀಷ್ಮನನ್ನು ಕರೆಸಿ, ಅಂಬೆಗೆ ನ್ಯಾಯವನ್ನು ಒದಗಿಸಲುವ ಸಲುವಾಗಿ ಆಕೆಯನ್ನು ಮದುವೆಯಾಗು ಎಂದು ಹೇಳುತ್ತಾನೆ. ಅದಕ್ಕೆ ಭೀಷ್ಮ, ತಾನು ಆಜನ್ಮ ಬ್ರಹ್ಮಚಾರಿ, ಆಕೆಯನ್ನು ಮದುವೆಯಾಗಲು ಸಾಧ್ಯವೇ ಇಲ್ಲವೆಂದು ವಾದಿಸುತ್ತಾನೆ. ಇದನ್ನು ಕೇಳಿದ ಪರಶುರಾಮ ಕೋಪದಿಂದ, ಹಾಗದರೆ ನನ್ನೊಡನೆ ಯುದ್ಧಮಾಡು, ಯುದ್ದದಲ್ಲಿ ಸೋತರೆ ಅಂಬೆಯನ್ನು ಮದುವೆಯಾಗಬೇಕು, ಎಂದು ಕಟ್ಟು ಮಾಡುತ್ತಾನೆ.ಇಪ್ಪತ್ಮೂರು ದಿನ ಈ ಮಹಾಯುದ್ಧ ನಡೆದರೂ ಯಾರು ಸೋಲುವಂತೆ ಕಾಣಲಿಲ್ಲಾ, ಆಗ ಭೀಷ್ಮ ನಾರದರ ಸಲಹೆಯಂತೆ ಬ್ರಹ್ಮಾಸ್ತ್ರವನ್ನು ಉಪಯೋಗಿಸುತ್ತಾನೆ, ಅದಕ್ಕೆ ಪರಶುರಾಮ ಯುದ್ದವನ್ನು ನಿಲ್ಲಿಸುತ್ತಾರೆ. ಪರಶುರಾಮ ಕಾಡಿಗೆ ಹಿಂದಿರುಗಿ, ಅಂಬಾಗೆ ನಡೆದ ಕತೆಯನ್ನು ವಿವರಿಸಿ, ಅವಳಿಗೆ ಭೀಷ್ಮನ ರಕ್ಷಣೆಯಲ್ಲಿರುವಂತೆ ಸಲಹೆ ಮಾಡುತ್ತಾನೆ. ಕೋಪದಿಂದ ಪರಶುರಾಮನ ಸಲಹೆಯನ್ನು ತಿರಸ್ಕರಿಸಿ, ತಾನು ತಪಸ್ಸು ಮಾಡಲು ತೆರಳುತ್ತಾಳೆ.
ಅನ್ನ ನೀರು ತ್ಯಜಿಸಿ, ಯಮುನಾ ನದಿಯ ತೀರದಲ್ಲಿ ತನ್ನ ತಪಸ್ಸನ್ನು ಶುರು ಮಾಡುತ್ತಾಳೆ. ಇವಳ ತಪಸ್ಸಿಗೆ ಹೆದರಿ, ಅಲ್ಲಿನ ಋಶಿಗಳು ತಪಸ್ಸನ್ನು ನಿಲ್ಲಿಸುವಂತೆ ಕೇಳುತ್ತಾರೆ. ಆದರೆ ಆಕೆ ಮುಂದಿನ ಜನ್ಮದಲ್ಲಿ ಗಂಡಾಗಿ ಹುಟ್ಟಿ, ಭೀಷ್ಮನ ಸಾವಿಗೆ ಕಾರಣಳಾಗುವುದೇ ತನ್ನ ಗುರಿಯೆಂದು, ತನ್ನ ಕಠಿಣ ತಪಸ್ಸನ್ನು ಮುಂದುವರೆಸುತ್ತಾಳೆ. ಆಕೆಯ ತಪಸ್ಸಿಗೆ ಶಿವ ಒಲಿದು, ಆಕೆಯ ಇಷ್ಟದಂತೆ, ಮುಂದೆ ದ್ರುಪದರಾಜನ ಮಗನಾಗಿ ಹುಟ್ಟಿ, ಭೀಷ್ಮನ ಸಾವಿಗೆ ಕಾರಣವಾಗುವಂತೆ ಹಾಗು ಆಕೆಗೆ ತನ್ನ ಪೂರ್ವಜನ್ಮದ ಗುರುತು ಇರುವಂತೆ ಆಶೀರ್ವದಿಸುತ್ತಾನೆ. ಇದರಿಂದ ಆನಂದದಿಂದ ಅಂಬಾ, ಯಜ್ಙ ಕುಂಡದೊಳಗೆ ’ಭೀಷ್ಮನ ಸಾವಿಗಾಗಿ’ ಎನ್ನುತ್ತಾ ಹಾರಿ, ತನ್ನ ಪ್ರಾಣವನ್ನು ತ್ಯಜಿಸುತ್ತಾಳೆ.
ಇನ್ನೊಂದು ಕತೆಯ ಪ್ರಕಾರ, ಅಂಬಾಳ ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷನಾದವನು ಕಾರ್ತಿಕೇಯ (ಶಿವನ ಮಗ). ಕಾರ್ತಿಕೇಯ ಅಂಬಾಳಿಗೆ, ಎಂದೂ ಬಾಡದ ಕಮಲದ ಹೂವಿನ ಹಾರವನ್ನು ಕೊಟ್ಟು, “ಇದು ಯಾರ ಕೊರಳನ್ನು ಅಲಂಕರಿಸುತ್ತದೋ, ಅವರು ಭೀಷ್ಮನ ಸಾವಿಗೆ ಕಾರಣರಾಗುತ್ತಾರೆ”, ಎಂದು ಹೇಳುತ್ತಾನೆ. ಆನಂದದಿಂದ ಅಂಬಾ, ಆ ಹಾರವನ್ನು ಹಿಡಿದು, ಮತ್ತೊಮ್ಮೆ ಎಲ್ಲ ರಾಜರ ಬಳಿಗೆ ಹೋಗುತ್ತಾಳೆ, ಆದರೆ ಯಾರು ಆಕೆಗೆ ಸಹಕರಿಸುವುದಿಲ್ಲಾ. ಕೊನೆಗೆ ಆಕೆ ದ್ರುಪದನ ಬಳಿ ಬರುತ್ತಾಳೆ, ಅವನೂ ಆ ಹಾರವನ್ನು ಹಾಕಿಕೊಳ್ಳಲು ನಿರಾಕರಿಸುತ್ತಾನೆ. ಇದರಿಂದ ನೊಂದ ಅಂಬಾ, ಆ ಹಾರವನ್ನು ದ್ರುಪದನ ಅರಮನೆಯ ಮುಂದೆ ಇದ್ದ ಕಂಬದ ಮೇಲೆ ಎಸೆದು, ಮತ್ತೆ ಕಾಡಿಗೆ ಹೊರಟುಹೋಗುತ್ತಾಳೆ, ಆಕೆ ಸಾಯುವವರೆಗೂ, ಯಾರು ಆ ಹಾರವನ್ನು ಹಾಕಿಕೊಳ್ಳುವ ಧೈರ್ಯವನ್ನು ಮಾಡುವುದಿಲ್ಲಾ.
ಪಾಂಚಾಲ ದೇಶದ ದ್ರುಪದ ರಾಜನಿಗೆ ಬಹಳ ಕಾಲ ಮಕ್ಕಳಿರಲಿಲ್ಲಾ, ಆಗ ಆತ ಕಾಡಿನಲ್ಲಿ ಕಠೋರವಾದ ತಪಸ್ಸನ್ನು ಆಚರಿಸಿ, ಶಿವನನ್ನು ಒಲಿಸಿಕೊಂಡು ತನಗೊಂದು ಗಂಡು ಮಗುವನ್ನು ಕೊಡಬೇಕೆಂದು ಕೇಳಿಕೊಳ್ಳುತ್ತಾನೆ. ಆದರೆ ಶಿವ ಅವನಿಗೆ ಹೆಣ್ಣು ಮಗುವೊಂದನ್ನು ದಯಪಾಲಿಸಿ, ಮುಂದೆ ಈ ಹೆಣ್ಣು ಮಗು ಗಂಡು ಮಗುವಾಗಿ ಬದಲಾಗುತ್ತಾಳೆ ಎಂದು ಆಶೀರ್ವದಿಸುತ್ತಾನೆ. ಶಿವನ ವರದಂತೆ, ದ್ರುಪದನಿಗೆ ಹೆಣ್ಣು ಮಗುವೊಂದು ಹುಟ್ಟುತ್ತದೆ, ಅವಳಿಗೆ ಶಿಖಂಡಿನಿ ಎಂದು ಹೆಸರಿಡುತ್ತಾರೆ. ಆದರೆ ಆಕೆಯನ್ನು ಗಂಡು ಮಗುವಿನಂತೆ ಬೆಳೆಸುತ್ತಾರೆ. ಬೆಳೆದು ದೊಡ್ಡವಳಾದ ಮೇಲೆ ಗಂಡು ವೇಷದ ಶಿಖಂಡಿನಿಯನ್ನು, ದಶರ್ನ ರಾಜ್ಯದ ರಾಜನಾದ ಹಿರಣ್ಯವರ್ಣನ ಮಗಳಿಗೆ ಮದುವೆ ಮಾಡಿಕೊಡುತ್ತಾನೆ. ಮದುವೆಯ ನಂತರ ಶಿಖಂಡಿನಿ ಹೆಣ್ಣೆಂದು ಸ್ವತಃ ಶಿಖಂಡಿನಿ ಹಾಗು ಇತರರಿಗೆ ತಿಳಿದು ಹಿರಣ್ಯವರ್ಣರಾಜ ಪಾಂಚಲರಾಜ್ಯದ ಮೇಲೆ ಯುದ್ಧಕ್ಕೆ ಹೊರಡುತ್ತಾನೆ. ಇದರಿಂದ ನೊಂದ ಶಿಖಂಡಿನಿ ಕಾಡಿಗೆ ಹೊರಟು, ಸಾಯುವ ವರೆಗೂ ಕಠಿಣ ತಪಸ್ಸಿನಲ್ಲಿ ತೊಡಗಲು ನಿರ್ಧರಿಸುತ್ತಾಳೆ. ಆಗ ಸ್ತುನಕರ್ಣ ಎಂಬ ಯಕ್ಷ ಆಕೆಯನ್ನು ಕಾಪಾಡಿ, ತನ್ನ ಗಂಡಸುತನವನ್ನು ಶಿಖಂಡಿನಿಗೆ ಕೊಟ್ಟು ಆಕೆಯ ಹೆಣ್ಣುತನವನ್ನು ತಾನು ಸ್ವೀಕರಿಸುತ್ತಾನೆ. ಶಿಖಂಡಿನಿ ಹೀಗೆ ಶಿಖಂಡಿಯಾಗಿ ಬದಲಾಗುತ್ತಾಳೆ. ಹಿರಣ್ಯವರ್ಣರಾಜನ ಮರಣಾನಂತರ, ಶಿಖಂಡಿ ತನ್ನ ರಾಜ್ಯಕ್ಕೆ ಹಿಂದಿರುಗುತ್ತಾನೆ.
ಮೇಲೆ ಹೇಳಿದ ಮತ್ತೊಂದು ಕತೆಯ ಪ್ರಕಾರ ಅಂಬಾ ಕಾರ್ತಿಕೇಯನ ವರದಿಂದ ಪಡೆದ ಕಮಲದ ಹಾರವನ್ನು, ಶಿಖಂಡಿ ತನ್ನ ಕೊರಳಿಗೆ ಧರಿಸುತ್ತಾನೆ. ಅದನ್ನು ಕಂಡ ದ್ರುಪದ, ಶಿಖಂಡಿ ಭೀಶ್ಮನ ಸಾವಿಗೆ ಕಾರಣನಾಗುತ್ತಾನೆ ಎಂದು ತಿಳಿದು ಆನಂದ ಹೊಂದುತ್ತಾನೆ.
ಅಂಬಾಳ ಜಗತ್ತಿನಲ್ಲಿ ಇಷ್ಟೆಲ್ಲಾ ನಡೆಯುವಾಗ, ಅತ್ತ ಹಸ್ತಿನಾಪುರದಲ್ಲಿ, ಸತ್ಯವತಿಯ ಸೊಸೆಯರಾದ ಅಂಬಿಕಾ ಹಾಗು ಅಂಬಾಲಿಕಾರಿಗೆ, ದೃತರಾಷ್ಟ್ರ, ಪಾಂಡು ಮಕ್ಕಳಾಗುತ್ತಾರೆ. ದೃತರಾಷ್ಟ್ರ ಕೌರವರಿಗೆ ಜನ್ಮ ನೀಡಿದರೆ, ಪಾಂಡು ಪಾಂಡವರಿಗೆ ಜನ್ಮ ನೀಡುತ್ತಾನೆ. ಮುಂದೆ ಇವರಿಬ್ಬರೂ ಬದ್ಧವೈರಿಗಳಾಗಿ, ಕೊನೆಗೆ ಕುರುಕ್ಷೇತ್ರ ಯುದ್ಧ ಶುರುವಾಗುತ್ತದೆ.
ದ್ರುಪದರಾಜನಿಗೂ ದ್ರುಷ್ಟದ್ಯುಮ್ನ ಹಾಗು ದ್ರೌಪದಿ ಎಂಬ ಇನ್ನೆರಡು ಮಕ್ಕಳಾಗುತ್ತಾರೆ. ದ್ರೌಪದಿ ಪಾಂಡವರ ಮಡದಿಯಾಗುತ್ತಾಳೆ.ಕುರುಕ್ಷೇತ್ರ ಯುದ್ದದಲ್ಲಿ ಭೀಷ್ಮ ಕೌರವರ ಕಡೆ ಸೇರಿದರೆ, ಶಿಖಂಡಿ ತನ್ನ ಭಾವನಾದ ಅರ್ಜುನ ಕಡೆ ಸೇರಿಕೊಳ್ಳುತ್ತಾನೆ. ಕುರುಕ್ಷೇತ್ರ ಯುದ್ಧ ಶುರುವಾಗುತ್ತದೆ ಕೌರವ ಪಡೆಯ ನಾಯಕನಾಗಿ ಭೀಷ್ಮ ನಿಲ್ಲುತ್ತಾನೆ. ಪಾಂಡವರು ಏನೇ ಮಾಡಿದರೂ ಭೀಷ್ಮನನ್ನು ಸೋಲಿಸಲು ಸಾಧ್ಯವಾಗಿರಲಿಲ್ಲಾ. ಭೀಷ್ಮನನ್ನ ನ್ಯಾಯವಾಗಿ ಸೋಲಿಸುವುದು ಸಾಧ್ಯವಿಲ್ಲದ ಮಾತು ಎಂಬುದು ಕೃಷ್ಣನಿಗೆ ತಿಳಿದಿತ್ತು. ಹಾಗು ಭೀಷ್ಮ “ತಾನು ಹೆಂಗಸರ ಮೇಲಾಗಲಿ, ಹೆಂಗಸಾಗಿ ಹುಟ್ಟಿದವರ ಮೇಲಾಗಲಿ, ಹೆಂಗಸಿನ ಹೆಸರಿರುವವರ ಮೇಲಾಗಲಿ, ಹೆಂಗಸರಂತೆ ಕಾಣುವವರ ಮೇಲಾಗಲಿ, ಬಾಣ ಪ್ರಯೋಗ ಮಾಡುವುದಿಲ್ಲಾ” ಎಂದು ಮಾಡಿದ್ದ ವಚನ ಕೂಡಾ ಕೃಷ್ಣನಿಗೆ ತಿಳಿದಿತ್ತು. ಹಾಗಾಗಿ, ಭೀಷ್ಮನನ್ನು ಸೋಲಿಸುವ ಸಲುವಾಗಿ, ಶಿಖಂಡಿಯನ್ನು ಅರ್ಜುನನ ಸಾರಥಿಯನ್ನಾಗಿ ಕಳಿಸುತ್ತಾರೆ. ರಣರಂಗದಲ್ಲಿ ಅರ್ಜುನನ ಸಾರಥಿಯಾಗಿ ಬಂದ ಶಿಖಂಡಿಯನ್ನು ಕಂಡ ಭೀಷ್ಮ ತನ್ನ ಶಸ್ತ್ರಾರ್ಥಗಳನ್ನು ತ್ಯಜಿಸುತ್ತಾನೆ. ಅದೇ ಸರಿಯಾದ ಸಮಯವೆಂದು, ಅರ್ಜುನ, ಶಿಖಂಡಿ ಭೀಷ್ಮನ ಮೇಲೆ ಬಾಣಗಳ ಮಳೆ ಸುರಿಸುತ್ತಾರೆ. ಶಿಖಂಡಿಯ ಬಾಣಗಳು ಭೀಷ್ಮನಿಗೆ ತಾಗಿದರೂ ಆಳವಾದ ಗಾಯಗಳನ್ನು ಮಾಡಿರುವುದಿಲ್ಲಾ, ಕೊನೆಗೆ ಅರ್ಜುನ ಬಿಟ್ಟ ಬಾಣ ತಗುಲಿದಾಗ, ಭೀಷ್ಮ ತಾನು ಸಾಯುವ ಇಂಗಿತವನ್ನು ವ್ಯಕ್ತಪಡಿಸುತ್ತಾನೆ.
ಭೀಷ್ಮಾ ಇಚ್ಛಾಮರಣಿ, ಅಂದರೆ ಅವನು ಬೇಕೆಂದಾಗ ಸಾಯಬಹುದಾಗಿತ್ತು. ಗಂಗೆ ತನ್ನ ಮಗ ಭೀಷ್ಮನಿಗೆ ಇಚ್ಛಾಮರಣಿಯ ವರವನ್ನು ಕೊಟ್ಟಿರುತ್ತಾಳೆ. ಭೀಷ್ಮ ಅರ್ಜುನನನ್ನು ಕರೆದು ಒಂದು ಶರಮಂಚವನ್ನು ಕಟ್ಟಿಸಿ ಅದರೆ ಮೇಲೆ ಮಲಗಿಕೊಳ್ಳುತ್ತಾನೆ. ಉತ್ತರಾಯಣದ ಕಾಲ ಬರುವವರೆಗೂ ತನ್ನ ಜೀವವನ್ನು ಹಿಡಿದಿಟ್ಟು ಕೊಂಡು ನಂತರ ತನ್ನ ದೇಹವನ್ನು ತ್ಯಜಿಸುತ್ತಾನೆ. ಅಲ್ಲಿಗೆ ಅಂಬಾಳ ಸೇಡು ತೀರಿಸಿದಂತಾಗುತ್ತದೆ.
ಅಶ್ವಥಾಮ ತೀರ್ಥಯಾತ್ರೆಯಿಂದ ಬಂದು ತೊಡೆ ಮುರಿಸಿಕೊಂಡು ಬಿದ್ದಿದ್ದ ದುರ್ಯೋದನನ್ನು ಕಂಡು, ಪಾಂಡವರ ತಲೆಗಳನ್ನು ತಂದು ಒಪ್ಪಿಸುತ್ತೇನೆ ಎಂದು ಹೇಳಿ, ಆ ರಾತ್ರಿ, ಪಾಂಡವರ ಶಿಬಿರದ ಮೇಲೆ ದಾಳಿ ಮಾಡಿ ಪಾಂಡವರ ಐವರು ಮಕ್ಕಳನ್ನು ಕೊಂದ ರಾತ್ರಿ, ಅಶ್ವಥಾಮ ಶಿಖಂಡಿಯನ್ನು ಕೂಡಾ ಕೊಲ್ಲುತ್ತಾನೆ.